ಈಸ್ಟಮನ್, ಜಾರ್ಜ್
1854-1932. ಪ್ರಸಿದ್ಧ ಪರಿಶೋಧಕ, ಕೈಗಾರಿಕೋದ್ಯಮಿ ಮತ್ತು ದಾನಿ. ಛಾಯಾಚಿತ್ರಗ್ರಹಣವನ್ನೂ (ಫೋಟೋಗ್ರಫಿ) ಕುರಿತು ಇವನು ಹಾಕಿಕೊಟ್ಟ ದಾರಿ ಅದರ ಸರ್ವತೋಮುಖ ವಿಕಾಸಕ್ಕೆ ನಾಂದಿಯಾಯಿತು. ಈತ ಅಮೆರಿಕದ ನಾಗರಿಕ. ಕಡುಬಡತನದ ಮನೆಯಲ್ಲಿ ಜನಿಸಿದಾಗ ಸಾಂಪ್ರದಾಯಿಕ ವಿದ್ಯಾಭ್ಯಾಸದ ಸೌಲಭ್ಯ ದೊರೆಯಲಿಲ್ಲ. ಕೆಲಸಮಾಡಿ ಹೊಟ್ಟೆಹೊರೆದು ಕೊಳ್ಳಬೇಕಾದ ದುಃಸ್ಥಿತಿ ಬಂತು. ಈತನ ಸುಪ್ತಪರಿಶೋಧಕ ಪ್ರವೃತ್ತಿ ಛಾಯಾಗ್ರಹಣ ಕ್ಷೇತ್ರದಲ್ಲಿ ಕ್ರಮೇಣ ಪ್ರಕಟವಾಗತೊಡಗಿತು. ಅಲ್ಲಿ ಇವನಿನ್ನೂ ಕೇವಲ ಹೊಸಬ. ಚಿತ್ರಗ್ರಹಣವಾದರೋ ಒಂದು ಯಜ್ಞದಷ್ಟೇ ಕಠಿಣವೂ ಸಹನೆಯನ್ನು ಬೇಡುವುದೂ ಆಗಿದ್ದ ಕ್ರಿಯೆ ಕ್ಯಾಮರಾ. ಅದರೊಳಗೆ ಅಳವಡಿಸಬೇಕಾಗಿದ್ದ ರಾಸಾಯನಿಕ ಲೇಪಿತ ಫಲಕ. ಚಿತ್ರ ತೆಗೆದ ತರುವಾಯದ ಸಂಸ್ಕರಣ ಕ್ರಿಯೆ-ಇವು ಒಂದೊಂದೂ ಸಾಕಷ್ಟು ಸಂಕೀರ್ಣವಾಗಿತ್ತು. ತಜ್ಞ ರಸಾಯನ ಶಾಸ್ತ್ರಜ್ಞರ ಹೊರತು ಮಿಕ್ಕವರಿಗೆ ಆಗ್ಗೆ ಇಲ್ಲಿ ಪ್ರವೇಶವಿರಲಿಲ್ಲ. ಚಿತ್ರಗ್ರಹಣ ಕ್ರಿಯೆಯನ್ನು ಸರಳೀಕರಿಸಿ ಅದು ಸಾಮಾನ್ಯ ಜನರಲ್ಲಿ ಒಂದು ಹವ್ಯಾಸವಾಗಿ ವಿಕಸಿಸುವಂತೆ ಮಾಡಿದರೆ ಇದಕ್ಕೆ ಉಜ್ವಲ ಭವಿಷ್ಯವಿದೆ. ಒಂದು ಕೈಗಾರಿಕೋದ್ಯಮವಾಗಿ ಇದು ವಿಫುಲ ಲಾಭದಾಯಕವಾಗಬಲ್ಲದು ಎಂಬುದನ್ನು ಈಸ್ಟ್‍ಮನ್ ಕಂಡುಕೊಂಡ. ಅಂದು ರಾಸಾಯನಿಕ ಲೇಪಿತ ಫಲಕವನ್ನು ಚಿತ್ರತೆಗೆದು ಮೊದಲು ಸಿದ್ಧಪಡಿಸಿ (ಇಂಥ ಫಲಕದ ಹೆಸರು ಚಂಡಿಫಲಕ ಎಂದರೆ ವೆಟ್ ಪ್ಲೇಟ್) ಒಡನೆ ಚಿತ್ರ ತೆಗೆಯಬೇಕಾಗಿತ್ತು. ಚಂಡಿಫಲಕ ಹೆಚ್ಚುಕಾಲ ಉಳಿಯುತ್ತಿರಲಿಲ್ಲ. ಇದರ ಬದಲು ಒಣಫಲಕವನ್ನು ಸಿದ್ಧಪಡಿಸಿ ಗ್ರಾಹಕರಿಗೆ ಪೂರೈಸುವುದು ಸಾಧ್ಯವಾದರೆ ಆಗ ಛಾಯಾಚಿತ್ರಗ್ರಹಣ ಜನ ಸಾಮಾನ್ಯರ ವ್ಯಾಪ್ತಿಗೆ ಒಳಪಡುವುದು ಖಂಡಿತ ಎಂದು ಈಸ್ಟ್‍ಮನ್ ಮುನ್ನೋಡಿದ. 1878ರಲ್ಲಿ ಇಂಥ ರಾಸಾಯನಿಕ ಒಣಫಲಕ ನಿರ್ಮಾಣದಲ್ಲಿ ಅವನಿಗೆ ಯಶಸ್ಸು ಲಭಿಸಿತು. ಒಣಫಲಕವೇನೋ ಆದರೂ ಅದು ಗಾಜಿನದಾದ್ದರಿಂದ ಸಾಕಷ್ಟು ಆಕಾರ ವಿಕಾರವಾಗಿತ್ತು. ಬಳಸುವಾಗ ಕೊಂಚ ಅಜಾಗರೂಕತೆಯೂ ಅದಕ್ಕೆ ಮಾರಕವೇ ಆಗುತ್ತಿತ್ತು. ಆದ್ದರಿಂದ ಮುಂದಿನ ಸುಧಾರಣೆ ಸಹಜವಾಗಿ ಫಿಲ್ಮ್ ನಿರ್ಮಾಣದ ದಾರಿಯಲ್ಲಿ ನಡೆಯಿತು. 1884ರಲ್ಲಿ ಈಸ್ಟ್‍ಮನ್ ತಾನು ನಿರ್ಮಿಸಿದ ಚಿತ್ರಗ್ರಾಫಿ ಫಿಲ್ಮಿಗೆ ಏಕಸ್ವವನ್ನು (ಪೇಟೆಂಟ್) ಪಡೆದ. ಅದೇ ವರ್ಷ ಈಸ್ಟ್‍ಮನ್ ಡ್ರೈಪ್ಲೇಟ್ ಅಂಡ್ ಫಿಲ್ಮ್ ಕಂಪನಿಯನ್ನು ಸ್ಥಾಪಿಸಿದ. ಜೆಲ್ ಲೇಪಿತ ಕಾಗದವೇ ಈ ಫಿಲ್ಮ್. ಇನ್ನುಳಿದದ್ದು ಪ್ರಚಾರ. ಫಿಲ್ಮಿನಿಂದ ಕೂಡಿದ್ದ ಕ್ಯಾಮರಾವನ್ನು ಈಸ್ಟ್‍ಮನ್ ಜನರಿಗೆ ಮಾರಲು ತೊಡಗಿದ. ಇಂಥ ಕ್ಯಾಮರಾಕ್ಕೆ ವ್ಯಾಪಾರ ದೃಷ್ಟಿಯಿಂದ ಜನರ ಗಮನ ಸೆಳೆದ ಒಂದು ವಿನೂತನ ಹೆಸರು ಆವಶ್ಯಕವೆಂದು ಅವನು ಮನಗಂಡು ಕೊಡಾಕ್ ಕ್ಯಾಮರಾ (ಕೊಡಾಕ್ ಪದಕ್ಕೆ ಬೇರೆ ಯಾವ ಅರ್ಥವೂ ವೈಶಿಷ್ಟ್ಯವೂ ಇಲ್ಲ) ಎಂಬ ಪದವನ್ನು ಸೃಷ್ಟಿಸಿದ. "ನೀವು ಗುಂಡಿಯನ್ನು ಒತ್ತಿ-ಮಿಕ್ಕುದನ್ನು ನಮಗೆ ಬಿಡಿ." ಇದು ಕೊಡಾಕ್ ಕ್ಯಾಮರಾ ಕಂಪನಿಯ ವ್ಯಾಪಾರದ ಯಶಸ್ವೀ ಘೋಷಣೆಯಾಗಿತ್ತು. ಫಿಲ್ಮ್ ಅಳವಡಿಕೆಗೊಂಡಿದ್ದ ಕ್ಯಾಮರಾವನ್ನು ಗ್ರಾಹಕ ಪಡೆಯುತ್ತಿದ್ದ; ಗುಂಡಿ ಒತ್ತಿ ಬೇಕಾದ ಚಿತ್ರಗಳನ್ನು ತೆಗೆದ ತರುವಾಯ ಅಷ್ಟನ್ನೂ ಕಂಪನಿಗೆ ಕಳಿಸುತ್ತಿದ್ದ; ಅಲ್ಲಿ ಅವರು ಚಿತ್ರಗಳನ್ನು ಮುದ್ರಿಸಿ ಅವುಗಳ ಪ್ರತಿಗಳನ್ನೂ ಫಿಲ್ಮ್ ಅಳವಡಿಸಿದ ಕ್ಯಾಮರಾವನ್ನೂ ಗ್ರಾಹಕನಿಗೆ ಹಿಂತಿರುಗಿಸುತ್ತಿದ್ದರು. ಈ ಪ್ರಕಾರ ಛಾಯಾ ಚಿತ್ರಗ್ರಹಣ ಒಂದು ಜನಪ್ರಿಯ ಹವ್ಯಾಸವಾಗಿ ಬಲುದೊಡ್ಡ ಕೈಗಾರಿಕೋದ್ಯಮವಾಗಿ ವೃದ್ಧಿಯಾಯಿತು. ಕ್ಯಾಮರಾದಲ್ಲಿ ಫಿಲ್ಮನ್ನು ಹಗಲು ಹೊತ್ತಿನಲ್ಲಿಯೇ ಅಳವಡಿಸುವ ಆವಿಷ್ಕಾರವನ್ನು 1891ರಲ್ಲಿ ಆರಂಭಿಸಿದ. 1893ರಲ್ಲಿ ಕಂಪನಿಯ ಹೆಸರನ್ನು ಈಸ್ಟ್‍ಮನ್ ಕೊಡಾಕ್ ಕಂಪನಿ ಎಂದು ಪರಿವರ್ತಿಸಿ ತಾನೇ ಅದರ ಅಧ್ಯಕ್ಷನಾದ. ಕಾಗದದ ಫಿಲ್ಮಿನ ಬದಲು ಸೆಲ್ಯುನಾಯಿಡ್ ಹೆಚ್ಚು ಉಪಯುಕ್ತವೆಂದು ತಿಳಿದುದರಿಂದ ಕೊಡಾಕ್ ಕಂಪನಿಯವರು ಅದನ್ನು 1889ರಿಂದ ಬಳಕೆಗೆ ತಂದರು. ಇಷ್ಟಾಗುವಾಗ ಈಸ್ಟ್‍ಮನ್ 1877ರಲ್ಲಿ ಕಂಡಿದ್ದ ಕನಸು ನನಸಾಗಿತ್ತು. ಜನಸಾಮಾನ್ಯರಿಗೆ ಛಾಯಾಚಿತ್ರಗ್ರಹಣ ಬಲುಪ್ರಿಯ ಹವ್ಯಾಸವಾಗಿ ಈ ವ್ಯಾಪಾರ ಬಹಳ ಕುದುರಿತ್ತು. ಆದ್ದರಿಂದ ಅಮೆರಿಕದಲ್ಲಿ (ಸಾಧ್ಯವಾದರೆ ಪ್ರಪಂಚದಲ್ಲಿ) ತನಗೆ ಏಕಸ್ವಾಮ್ಯವಿರಬೇಕೆಂದು ದೈತ್ಯ ಬಲದಿಂದ ಅಧ್ಯಕ್ಷ ಈಸ್ಟ್‍ಮನ್ ದುಡಿದ. 1927ರ ಸುಮಾರಿಗೆ ಈ ಎಲ್ಲವನ್ನು ಪೂರ್ಣವಾಗಿ ಸಾಧಿಸಿದ್ದ. ನಿರ್ಮಾಪಕಶಕ್ತಿಯಂತೆಯೇ ವ್ಯಾಪಾರ ಧರ್ಮವೂ ಈತನಲ್ಲಿ ಅಸಾಮಾನ್ಯ ಮಟ್ಟದಲ್ಲಿತ್ತು. ಹಾಗೆಯೆ ಈತ ಚಲನಚಿತ್ರಗಳ ರಂಗವನ್ನು ಪ್ರವೇಶಿಸಿದ. ಸೆಲ್ಯುಲಾಯಿಡ್ ಫಿಲ್ಮುಗಳು ಅಲ್ಲೊಂದು ಕ್ರಾಂತಿಯನ್ನೇ ನಡೆಸಿದವು. ಈ ಫಿಲ್ಮಗಳು ತೀವ್ರ ದಹ್ಯವಸ್ತುಗಳಾಗಿದ್ದುದರಿಂದ ಇವುಗಳ ದಾಸ್ತಾನು ಬಳಕೆ ಬಲು ಅಪಾಯಕಾರಿಯಾಗಿತ್ತು. 1924ರ ಸುಮಾರಿಗೆ ಅಗ್ನಿ ಅಪಾಯದಿಂದ ಹೆಚ್ಚು ಬಾಧೆ ತಟ್ಟದಂಥ ಫಿಲ್ಮ್‍ಗಳನ್ನು ನಿರ್ಮಿಸುವುದರಲ್ಲೂ ಈಸ್ಟ್‍ಮನ್ ಜಯಗಳಿಸಿದ. ಹೀಗೆ ಈಸ್ಟ್‍ಮನ್ ಜೀವನ ಚರಿತ್ರೆಯೆಂದರೆ ಛಾಯಾಚಿತ್ರಗ್ರಹಣ ವಿಕಾಸವೇ ಆಗಿದೆ.

ವ್ಯಾಪಾರ ಮಾರ್ಗದಲ್ಲಿ ಈತನದು ಬಲು ಕಟ್ಟುನಿಟ್ಟಿನ ಶಿಸ್ತಿನ ದಾರಿ. ಸಮರ್ಥರ ಆಯ್ಕೆ, ಪ್ರೋತ್ಸಾಹ, ಅನುಕಂಪದಿಂದ ಅವರನ್ನು ನಡೆಸಿಕೊಳ್ಳುವುದು. ಸದಾ ಶಿಷ್ಟಮಾರ್ಗಾನುಸರಣಿ. ಕೆಲಸಗಾರರ ಯೋಗಕ್ಷೇಮಗಳೆಡೆಗೆ ಸಹಾನುಭೂತಿಯ ವಿವೇಚನೆ-ಇವೆಲ್ಲ ಈಸ್ಟ್‍ಮನ್ನನ ಕಂಪನಿಯ ಸೂತ್ರಗಳಾಗಿದ್ದವು. ಅವನು 1,000,000,000 ಡಾಲರುಗಳಷ್ಟನ್ನು ವಿವಿಧ ವಿದ್ಯಾಸಂಸ್ಥೆಗಳಿಗೆ ದಾನವಾಗಿ ನೀಡಿದ. ಆದರೆ ಎಂದೂ ತೃಪ್ತಿ ಅರಿಯದ ಜೀವ ಇವನದು. 1932ರ ಸುಮಾರಿಗೆ ಯಶಸ್ಸಿನ ಶಿಖರ ಏರಿದ್ದಾಗ, ಕಟ್ಟಿದ ಕನಸುಗಳೆಲ್ಲವನ್ನೂ ವಾಸ್ತವಿಕವಾಗಿ ನೋಡಿ ಸಂತೋಷಿಸಿದಾಗ, ಹೊಸತೇನನ್ನೂ ಮಾಡಲು ಸಾಧ್ಯವಿಲ್ಲವಾದಾಗ, ದೀರ್ಘ ಏಕಾಂತವನ್ನು ಸೈರಿಸಿದಾದಾಗ ಆತ್ಮಹತ್ಯೆ ಮಾಡಿಕೊಂಡು ಅಸುನೀಗಿದ.	
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ